Day: August 24, 2014

ಸಿಗ್ನಲ್

ಕೆಂಪು ಸಿಗ್ನಲ್ ಬಿದ್ದು
ರಸ್ತೆಬದಿ ಭಿಕ್ಷೆ ಬೇಡುವವರಿಗೆ
ಗ್ರೀನ್ ಸಿಗ್ನಲ್ ಕೊಟ್ಟ ಹಾಗೆ
ಒಬ್ಬರಿಗೆ ಟ್ರಾಫಿಕ್ ಸಂಕಷ್ಟ
ಇನ್ನೊಬರಿಗೆ ಊಟಕ್ಕೆ ಸಂಕಟ

ಮಳೆಯೇ

ಬೆಂಡಾದ ಬೆನ್ನು
ನೊಂದ ಕಣ್ಣು
‘ಸಾಲ’ಗಳ ಕಂತೆ
ಸಾಲದು ಚಿಂತೆ
ಮುಗಿಯದ ಸಂತೆ
ಈ ಉಸಿರು ಬದುಕೋಕೆ
ಅದೆಷ್ಟು ಬೆವರು ಹರಿಸಲಿ

ನೀ ಬರೆದಿದ್ದಕ್ಕೆ ಬೆಳೆಯ
ಮುಂದೆ ಕಣ್ಣೀರಿಟ್ಟೆ
ಉಪ್ಪು ನೀರಿಗೆ ಅದೂ
ಕೊಡ ಬೆಳಯಲಿಲ್ಲ
ನಾಲ್ಕು ಹನಿಯಾದರೂ ಚೆಲ್ಲಿ
ನಿಲ್ಲಿಸು ನಿನ್ನ ಚೆಲ್ಲಾಟ
ಮಕ್ಕಳು ಕಾಯ್ತಿವೆ ನೀಡು
ಒಂದೊತ್ತಿಗೆಯಾದರೂ ಊಟ

ಕೈ ಮುಗಿದು ಬೇಡುವೆ
ಕೈ ಹಿಡಿ ನನ್ನನು
ಬಗೆ ಹರಿಸು ಈ ಒಗಟನು
ಹರಿಸು ನಾಲ್ಕು ಹನಿಯನು

ಕಪ್ಪು ಕಪ್ಪಾಗಿ ಒಟ್ಟಾಗಿ
ದಪ್ಪವಾಗಿ ಬಾ
ಧರೆಯ ಧಗೆಗೆ
ಹಸಿದ ಹೊಟ್ಟೆಗೆ
ಇಳೆಯಾಗಿ ಮಳೆಯಾಗಿ ಬಾ
ರೈತನ ಸ್ನೇಹಿತನಾಗಿ ಬಾ

ಕಾದಂಬರಿ

ಬದುಕೆಂಬ ಲೇಖನಿಗೆ
ನೆನಪುಗಳ ಶಾಯಿ ತುಂಬಿಸಿ
‘ಛಲ’ವೆಂಬ ಮುನ್ನುಡಿಯೊಂದಿಗೆ
‘ಸಾಧನೆ’ ಎಂಬ ಕಾದಂಬರಿ ಬರೆಯೋಣ

ದೈತ್ಯ ಅಲೆಗಳಿಗೆ ಎದೆ ಒಡ್ಡಿ ಮುಂದೆ ಸಾಗುವ ‘ಹಡಗು’

ನೆನಪುಗಳ ಬುತ್ತಿ ಬಿಚ್ಚಿ

ನೆನಪುಗಳ ಬುತ್ತಿ ಬಿಚ್ಚಿ
ಭಾವನೆಗಳಿಗೆ ಬಣ್ಣ ಹಚ್ಚಿ
ಒಂದೊಂದು ಬಣ್ಣದಲ್ಲೂ
ನೂರೆಂಟು ಕಾಮನಬಿಲ್ಲು
ಬಂದ ದಾರಿಯ ಮೆಲಕು
ಮಾಡಿದಾಗ ಸುಂದರ ಈ ಬದುಕು

ಹುಟ್ಟಿದ ಊರು
ಮೊದಲ ಗುರು
ಹಳೇ ಸ್ನೇಹ
ಅದೇ ಮೋಹ
ನೆನೆದರೆ ಕಣ್ಣು ಒದ್ದೆ
ಆ ನೆನಪೊಂದು ಸಿಹಿ ಮುದ್ದೆ.
ಬಲು ಸುಂದರ ಆ ನೆನಪು
ನೆನೆದಾಗ ಹೃದಯ ತಂಪು

ಅಮ್ಮ ಕೂಡುತ್ತಿದ್ದ ೧ ರೂಪಾಯಿ
ಅಪ್ಪ ಕೊಡಿಸುತ್ತಿದ್ದ ಮಿಠಾಯಿ
ಬೆನ್ನು ಹತ್ತುತಿದ್ದ ನಮ್ಮನೆ ನಾಯಿ
ಬಲು ಸುಂದರ ಆ ನೆನಪು
ನೆನೆದಾಗ ಹೃದಯ ತಂಪು

ಮತ್ತೆ ಬರುವುದೇ ಆ ಕಾಲ ?
ಬರಲು ಬಿಡುವುದೇ ಕಾಲ ?
ಮುಂಚೆಯೇ ಹಾಗೆ ಇರಬಹುದೇ ಎಲ್ಲರು
ಸೇರಬಹುದೇ ಈ ನೆನಪು ತನ್ನ ತವರು