ನಾನು ಕಲಾದೇವಿಯ ಆರಾಧಕ
ನನ್ನ ಸ್ವಕಪೊಲಕಲ್ಪನೆಯ ಕುಂಚಗಳಿಗೆ
ಭಾವನೆಗಳ ಬಣ್ಣವ ಲೇಪಿಸಿ
ಚಿತ್ರಿಸಿದ ಭಾವಚಿತ್ರ
ನನ್ನ ಕ್ರಿಯಾಶೀಲತೆಯ ಪ್ರತೀಕ
ನನ್ನದು ಬಣ್ಣದ ಲೋಕವೆಂದು
ಹೀಯಾಲಿಸಬೇಡಿ..
ಬಣ್ಣ ಹಚ್ಚಿ ನಟಿಸುವರು ನೀವಲ್ಲವೇ ?
ನಿಮ್ಮ ಮುಖವಾಡದ ಬಣ್ಣವನ್ನು
ನನ್ನ ಚಿತ್ರದಲ್ಲಿ ತೆರೆದಿಡುತ್ತೇನೆ
ನನ್ನ ಮೌನದ ಮಾತನ್ನು
ಚಿತ್ರದೊಂದಿಗೆ ಮಾತನಾಡಿಸುತ್ತೇನೆ..
ಬಣ್ಣವಿರದಿದ್ದರೆ ನನ್ನ ರಕ್ತದೊಂದಿಗೆ
ನೀರಿರದಿದ್ದರೆ ನನ್ನ ಕಣ್ಣೀರಿನೊಂದಿಗೆ
ಚಿತ್ರ ಬಿಡಿಸುತ್ತೇನೆ
ಹೃದಯದ ಭಾರ ಇಳಿಸುತ್ತೇನೆ
ನಾನು ಭಾವಜೀವಿ
ನಾನು ಸ್ವಪ್ನಜೀವಿ
ನಾನು ಧ್ಯೇಯಜೀವಿ
ಕನಸುಗಳ ಲೋಕದಲ್ಲಿ
ನಾನು ಚಿರಂಜೀವಿ!