ಶಾಂತವಾಗಿದ್ದ ನನ್ನ ಹೃದಯ ಸರೋವರದ ನೀರಿನ ಮೇಲೆ
ಅಂದೇನೋ ಬರೆದೆ ನೀನು ನಿನ್ನ ಬೆರಳಲ್ಲೇ
ಆಗ ಮೂಡಿದ ಪ್ರೇಮದ ಅಲೆಗಳು ಇನ್ನೂ ಕಂಪಿಸುತಲೇ ಇವೆ.
ಅಷ್ಟಕ್ಕೂ ನೀನು ಬರೆದದ್ದದ್ದಾದರೂ ಏನು ?
ಬರೆಯಲು ಕಾರಣವೇನು ?
ನಮ್ಮ ಪ್ರೀತಿಗೆ ನೀನು ಬಯಸಿದ ನೂತನ ಆಯಾಮವೇ ?
ನವಿಲುಗರಿಗಿಂತ ನವಿರಾದ ನೆನಪುಗಳ ನಡುವೆಯೂ
ನಿರಂತರವಾಗಿ ನಡೆಯುತ್ತಿದ್ದ ಕನಸುಗಳ ವಿನಿಮಯದ ನಡುವೆಯೂ
ನೀನು ಬರೆದಿಟ್ಟ ‘ವಿರಹ ಶಾಸನ’ವೇ ?
ನನ್ನ ಹೃದಯ ಈಗಲೂ ನಿನ್ನ ಬೆರಳನ್ನೇ ಹುಡುಕುತಿದೆ
ಉತ್ತರ ಪಡೆಯಲು…
Day: September 11, 2016
ಬದುಕೊಂದು ಕವನ ಸಂಕಲನ!
ಬದುಕೊಂದು ಕವನ ಸಂಕಲನ…
ಬದುಕೊಂದು ಕವನ ಸಂಕಲನ
ಹುಟ್ಟು ಮುನ್ನುಡಿ
ಸಾವು ಬೆನ್ನುಡಿ
ನಿಮ್ಮ ಹೆಸರೇ ಶೀರ್ಷಿಕೆ
ಕನಸುಗಳೇ ಪರಿವಿಡಿ
ದಿನಗಳೇ ಪುಟಗಳು
ಪ್ರತಿದಿನವೂ ಹೊಸ ಪದ್ಯಗಳು
ಪದ್ಯದ ಪದಗಳೇ ಅನುಭವಗಳು
ಭಾವಗಳೇ ಸಂಬಂಧಗಳು
ಪುಟಗಳು ತಿರುವಿದಂತೆ
ಬೆನ್ನುಡಿಗೆ ಸನಿಹ..
ಬೆನ್ನುಡಿಗೆ ಸನಿಹವಾದಂತೆ
ಮತ್ತೇ ಓದಬೇಕೆಂಬ ಹಂಬಲ
ಏನೂ ಮಾಡಲಾಗದ ಅಸಹಾಯಕತೆ!
‘ಅರ್ಪಣೆ’ ಅಡಿಯಲ್ಲಿ ಒಂದೆರಡು ಹೆಸರುಗಳು .
ಕಣ್ಣೀರು ಜಿನುಗಿಸುವ ಭಾವಗೀತೆಗಳು
ನಗಿಸುವ ಹನಿಗವನಗಳು
ಚಾಟಿಮಾತಿನ ತ್ರಿಪದಿಗಳು
ಮಾತು ಕಲಿಸಿದ ವಚನಗಳು!
ಕೊರಗುವ /ಕರಗುವ ಕಥೆ/ವ್ಯಥೆಗಳು
ಒಬ್ಬಬರದ್ದು ಒಂದೊಂದು ಪ್ರಕಾರಗಳು
ಹೊತ್ತಿಗೆ ಮೇಲೆ ಹೊದಿಸಿದ ವಿಧವಿಧ ಆಕಾರ/ವಿಕಾರಗಳು
ಆದರೆ….
ಈ ಹೊತ್ತಿಗೆಯನ್ನು ಮುದ್ರಿಸಿದವರು ಪಾಲಕರು
ಬರೆದವರು ಮಾತ್ರ “ದೇವರು”