ಕಣ್ಣು ಮುಚ್ಚಿ ಬಿಡುವುದರೊಳಗೆ ಬದುಕು ಬದಲಾಗಿದೆ. ನೆರಳೊಂದೇ ನನ್ನೊಂದಿಗೆ.
ಅದೂ ಕೂಡ ಸಂಜೆಗೆ ಮಾಯ. ಕತ್ತಲಾದರೆ ಮತ್ತೆ ನೋವಾಗುವ ಮಾಯದ ಮನಸಿನ ಗಾಯ.
ಬದುಕು ಸಾವು ಗಿಂತ ಭೀಕರ. ಅಳುವ ಧ್ವನಿಗೆ ಕೇಳುವ ಕಿವಿ ಇಲ್ಲ. ಆದರೂ ಕಣ್ಣೀರು ನಿಲ್ಲಲ್ಲ.
ಬಾಯಿ ಬಿಟ್ಟರೆ ಬೀಗ ಹಾಕುವರೇ ಹೆಚ್ಚು. ಮೌನವೇ ಇಲ್ಲಿ ಮಾತು. ಮೌನದಲ್ಲೇ ನಡೆಯುತ್ತಿದೆ ಎಲ್ಲಾ ಗದ್ದಲ.
ಎಲ್ಲವೂ ಇದ್ದು ಏನು ಇಲ್ಲದ ಹಾಗೆ ಬದುಕುವುದು ಇಲ್ಲಿ ಹೊಸದೇನಲ್ಲ. ಹೊಸದು ಏನೇ ಬಂದರೂ ಅದು ಇಲ್ಲಿ ಹಳೇದು. ಹೊಸತನಕ್ಕೆ ಆಯಸ್ಸು ಕಡಿಮೆ. ನಮ್ಮ ಕಾಲಿನ ಹೇಸಿಗೆ ತೊಳೆದುಕೊಳ್ಳುವುದಕ್ಕಿಂತ ಮತ್ತೊಬ್ಬರ ಕಾಲಿನ ಬ್ರಾಂಡೆಡ್ ಚಪ್ಪಲಿ ಕದಿ ಯುವದರಲ್ಲಿ ಜನ ಮಗ್ನ. ನಗ್ನ ಸಮಾಜದಲ್ಲಿ ಎಲ್ಲವೂ ಇಲ್ಲಿ ಭಗ್ನ !
ಯಾವ ಉಸಿರಿಗೆ ಇಲ್ಲಿ ಎಷ್ಟು ಬೆಲೆ ..ಯಾರಿಗೆ ಗೊತ್ತು ?
ನಾವು ಉಸಿರಾಡುವ ಗಾಳಿಗೂ ನಮ್ಮ ಪಾಪ ತಗುಲಿದೆ.
ಎಲ್ಲಿದೆ ಇಲ್ಲಿ ಪುಣ್ಯ ಹುಡುಕಿ ಕೊಡಿ ?
ಪುಣ್ಯ ಬದುಕುತ್ತಿರುವುದಂತು ನಿಜ , ಆದರೆ ಕಣ್ಣಿಗೆ ಕಾಣದು ಅಥವಾ ಕಂಡರೂ ನಂಬ ಬೇಡ ಎಂಬ ಬುದ್ಧಿ.